ಫಿನ್ಸನ್, ನೀಲ್ಸ್ ರೈಬರ್ಗ್
1860-1904. ಚರ್ಮರೋಗಗಳ ಚಿಕಿತ್ಸೆಯಲ್ಲಿ ಒಂದು ಮೈಲಿಗಲ್ಲು ಸ್ಥಾಪಿಸಿದ ಡೇನಿಷ್ ಚಿಕಿತ್ಸಾ ವೈದ್ಯ. ಕೆಲವೊಂದು ಚರ್ಮರೋಗಗಲ್ಲಿ ಹೊಸದಾದ ಚಿಕಿತ್ಸಾಕ್ರಮವನ್ನು ವೈದ್ಯರಂಗಕ್ಕೆ ಕಾಣಿಕೆಯಾಗಿ ಸಲ್ಲಿಸಿದ್ದಕ್ಕಾಗಿ ಈತನಿಗೆ 1903ರಲ್ಲಿ ನೊಬೆಲ್ ಪಾರಿತೋಷಿಕ ಲಭಿಸಿತು. ಪಾರೋ ದ್ವೀಪದ ಥೊರ್ಸವಾನ್ ಎಂಬಲ್ಲಿ 1860 ಡಿಸೆಂಬರ್ 15ರಂದು ಜನನ. ಈತನ ತಾಯಿ ತಂದೆ ಐಸ್‍ಲೆಂಡ್ ಕಡೆಯವರು. ಶಾಲಾವಿದ್ಯಾಭ್ಯಾಸ ರೈಜವಿಕ್‍ನಲ್ಲಿ ಆಯಿತು. 1890ರಲ್ಲಿ ಕೋಪನ್‍ಹೇಗನ್ ವಿಶ್ವವಿದ್ಯಾಲಯದಿಂದ ವೈದ್ಯ ಪದವಿ ಮುಗಿಸಿದ ಬಳಿಕ ಜೀವಾಣುಗಳ ಮೇಲೆ ಸೂರ್ಯನ ಬೆಳಕಿನ ಪ್ರಭಾವ ತಿಳಿಯುವ ಪ್ರಯೋಗ ಮಾಡುವುದರಲ್ಲಿ ನಿರತನಾದ. ಚರ್ಮರೋಗಗಳ ಚಿಕಿತ್ಸೆಯಲ್ಲಿ ಒಂದು ಮೈಲಿಗಲ್ಲು ಸ್ಥಾಪಿಸಿದ ಡೇನಿಷ್ ಚಿಕಿತ್ಸಾ ವೈದ್ಯ. ಸಿಡುಬಿನ ಬೆಳೆವಣಿಗೆಯ ಕಾಲದಲ್ಲಿ ಮೂಡುವ ಕೀವುಗುಳ್ಳೆಗಳನ್ನು ಸೂರ್ಯಪ್ರಕಾಶದ ಸಪ್ತವರ್ಣಗಳಲ್ಲೊಂದಾದ ಕಿರಣಗಳ ಉಪಯೋಗದಿಂದ ಯಶಸ್ವಿಯಾಗಿ ತಡೆಗಟ್ಟುವ ವಿಶಿಷ್ಟ ರೀತಿಯ ಚಿಕಿತ್ಸೆಯನ್ನು 1893ರಲ್ಲಿ ವೈದ್ಯಜಗತ್ತಿಗೆ ತೋರಿಸಿದ. ಸೂರ್ಯಪ್ರಕಾಶದಲ್ಲಿರುವ ಕ್ರಿಯಾಶೀಲ ಕಿರಣಗಳ (ಆ್ಯಕ್ಟಿವಿಕ್ ರೇಸ್) ರೋಗನಿರೋಧಕ ತ್ರಾಣವನ್ನು ಮನಗಂಡು ಚರ್ಮ ಕ್ಷಯದಲ್ಲಿ ಅತಿನೇರಳೆ ಕಿರಣಗಳ ಉಪಯೋಗದಿಂದ ರೋಗವನ್ನು ಗುಣಪಡಿಸುವ ಹೊಸ ಪದ್ಧತಿಯನ್ನು ಫಿನ್ಸನ್ ರೂಪಿಸಿದ. ಜೀವಾಣುಗಳ ಮೇಲೆ ಬೆಳಕಿನ ಪ್ರಭಾವ ಕುರಿತ ವಿಶೇಷ ವಿಚಾರ ಸರಣಿ ಇವನದು (1895). ಬಲವರ್ಧಿತ ಕ್ರಿಯಾಶೀಲ ಕಿರಣಗಳಿಂದ ಚರ್ಮಕ್ಷಯದ ಚಿಕಿತ್ಸೆ (1897) ಎಂಬ ಈತನ ಪ್ರಕಟಣೆಗಳು ವೈದ್ಯವಿಜ್ಞಾನದಲ್ಲಿ ಹೊಸ ಬೆಳಕನ್ನು ಚೆಲ್ಲಿದುವು. ಈತನ ಮಹತ್ತರ ಸಾಧನೆಯ ಸ್ಮರಣೆಗಾಗಿ 1896ರಲ್ಲಿ ಕೋಪನ್‍ಹೇಗನ್ನಿನಲ್ಲಿ ಲೈಟ್ ಇನ್‍ಸ್ಟಿಟ್ಯೂಟ್ ಸ್ಥಾಪನೆಯಾಯಿತು. 1904 ಸೆಪ್ಟೆಂಬರ್ 24ರಂದು ಫಿನ್ಸನ್ ನಿಧನನಾದ.																			      (ಜೆ.ಎಂ.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ